ಪ್ರಭಾಸ

1. ಧರ್ಮಪ್ರಜಾಪತಿ ಮತ್ತು ದಕ್ಷನ ಮಗಳಾದ ವಸು ಎಂಬ ದಂಪತಿಗಳಿಗೆ ಹುಟ್ಟಿದ ಎಂಟು ಜನ ಗಂಡುಮಕ್ಕಳಲ್ಲಿ ಕೊನೆಯವನು. ಇವನಿಗೆ ಬೃಹಸ್ಪತಿಯ ತಂಗಿಯಾದ ಯೋಗಸಿದ್ಧಿ ಎಂಬುವಳ ಜೊತೆ ಮದುವೆಯಾಯಿತು. ಇವರಿಬ್ಬರ ಮಗನೇ ದೇವಶಿಲ್ಪಿಯಾದ ವಿಶ್ವಕರ್ಮ.

	2. ಹಿರಣ್ಯಾ, ಸರಸ್ವತಿ ಮತ್ತು ಕಪಿಲಾ ನದಿಗಳ ಪವಿತ್ರ ಸಂಗಮದಲ್ಲಿರುವ ಪುಣ್ಯಕ್ಷೇತ್ರ. ಸಮುದ್ರ ತೀರದಲ್ಲಿರುವುದರಿಂದ ಮುಂಬಯಿಯಿಂದ ಇಲ್ಲಿಗೆ ಹಡಗುಗಳು ಬರುತ್ತವೆ. ಮಹಾಭಾರತದ ಕಾಲದಲ್ಲಿ ಇದೊಂದು ಪ್ರಮುಖ ಯಾತ್ರಾಸ್ಥಳವಾಗಿದ್ದಂತೆ ತೋರುತ್ತದೆ. ಪಾಂಡವರು ತಮ್ಮ ವನವಾಸ ಕಾಲದಲ್ಲಿ ಈ ಕ್ಷೇತ್ರವನ್ನು ಸಂದರ್ಶಿಸಿದ್ದರು. ಅರ್ಜುನ ತನ್ನ ತೀರ್ಥಯಾತ್ರಾ ಸಮಯದಲ್ಲಿ ಈ ಕ್ಷೇತ್ರಕ್ಕೆ ಬಂದಾಗ, ಸುಭದ್ರಾಪಹರಣಕ್ಕಾಗಿ ಶ್ರೀಕೃಷ್ಣನ ಆದೇಶದಂತೆ ಕಳ್ಳ ಋಷಿಯ ವೇಷ ತೊಟ್ಟ. ಯಾದವರು ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ಸರ್ವನಾಶವಾದಾಗ ಯಾದವರ ಪ್ರಮುಖರಾದ ಶ್ರೀಕೃಷ್ಣ ತನ್ನ ದೇಹ ವಿಸರ್ಜನೆ ಮಾಡಿದ್ದು; ಬಲರಾಮ ಶೇಷರೂಪದಿಂದ ಪಾತಾಳಕ್ಕೆ ಇಳಿದುಹೋದದ್ದು ಈ ಕ್ಷೇತ್ರದಲ್ಲಿಯೇ. ಇಲ್ಲಿರುವ ಮಹಾಕಾಲ, ಗಣೇಶ, ಸಿದ್ಧನಾಥ ಮಹಾದೇವ, ಬಲರಾಮ-ಮುಂತಾದವರ ಗುಡಿಗಳು ಈ ಐತಿಹ್ಯವನ್ನು ದೃಢಪಡಿಸುತ್ತವೆ.
(ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ